ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎಲ್ಲಾ 17 ಆರೋಪಿಗಳ ಬಂಧನ; ಕರೆಂಟ್‌ ಶಾಕ್‌ ಕೊಟ್ಟು ದರ್ಶನ್ ಗ್ಯಾಂಗ್ ಟಾರ್ಚರ್‌! ಧನರಾಜ್ ಬಂಧನದ ಬಳಿಕ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್‌ ಶಾಕ್‌ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ನಟ ದರ್ಶನ್ ಗ್ಯಾಂಗ್ ನ ಎಲ್ಲಾ 17 ಆರೋಪಿಗಳನ್ನು ಬಂಧಿಸಿದಂತಾಗಿದೆ.ರೇಣುಕಾಸ್ವಾಮಿ ಹತ್ಯೆ ಬಳಿಕ ನಾಪತ್ತೆಯಾಗಿದ್ದ ಪ್ರಕರಣದ ಒಂಬತ್ತನೇ ಆರೋಪಿ ರಾಜು ಅಲಿಯಾಸ್ ಧನರಾಜ್ ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಸೋಮವಾರ ತಿಳಿಸಿದ್ದಾರೆ. ಧನರಾಜ್ ಬಂಧನದ ಬಳಿಕ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್‌ ಶಾಕ್‌ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.33 ವರ್ಷದ ಅಭಿಮಾನಿಯ ಕೊಲೆ ಪ್ರಕರಣ ಬೆಳಕಿಗೆ ಬಂದ ಒಂದು ದಿನದ ನಂತರ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈಗ ನಾಪತ್ತೆಯಾಗಿದ್ದ ಧನರಾಜ್ ನನ್ನು ಪೊಲೀಸರು ಬಂಧಿಸಿದ್ದು, ದರ್ಶನ್ ಗೂ ತನಗೂ ನೇರ ಸಂಪರ್ಕವಿಲ್ಲ ಎಂದು ಧನರಾಜ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ರಾಜು ಐದನೇ ಆರೋಪಿ ನಂದೀಶ್ ಸ್ನೇಹಿತನಾಗಿದ್ದು, ದರ್ಶನ್ ಅವರ ಕಟ್ಟಾ ಅಭಿಮಾನಿ. ಅಭಿಮಾನಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಡಲು ನಂದೀಶ್ ರಾಜು ಎಂಬುವವರಿಂದ ವಿದ್ಯುತ್ ಉಪಕರಣ ಪಡೆದಿದ್ದು, ಬಳಿಕ ಮೃತಪಟ್ಟಿದ್ದಾರೆ.ರಾಜು ಮತ್ತು ನಂದೀಶ್ ಇಬ್ಬರೂ ಕೇಬಲ್ ವ್ಯಾಪಾರ ಮಾಡುತ್ತಿದ್ದರು. ರೇಣುಕಾಸ್ವಾಮಿ ಅವರಿಗೆ ಮೆಗ್ಗರ್ ಎಂಬ ವಿದ್ಯುತ್ ಪರೀಕ್ಷಾ ಸಾಧನದ ಮೂಲಕ ರೇಣುಕಾಸ್ವಾಮಿ ದೇಹದ ವಿವಿಧೆಡೆ ವಿದ್ಯುತ್ ಶಾಕ್ ನೀಡಿ ದರ್ಶನ್‌ ಗ್ಯಾಂಗ್ ಮೃಗೀಯವಾಗಿ ವರ್ತಿಸಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.ಈ ಮಧ್ಯೆ, ವೀರಶೈವ-ಲಿಂಗಾಯತ ಮಠಾಧೀಶ ರಂಭಾಪುರಿ ಸ್ವಾಮೀಜಿ ಅವರು ಮೃತ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ರೇಣುಕಾಸ್ವಾಮಿ ಹತ್ಯೆ ಅಮಾನವೀಯ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೃತರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಈ ಕ್ರೂರ ಹತ್ಯೆಯಿಂದ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ” ಎಂದು ಮಠಾಧೀಶರು ಹೇಳಿದ್ದಾರೆ.